ಆರ್‌ಸಿಬಿಗೆ ಮುಂಬೈ ಸವಾಲು

ಆರ್‌ಸಿಬಿಗೆ ಮುಂಬೈ ಸವಾಲು

ಚೆನ್ನೈ:  ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಗಳು ಐಪಿಎಲ್-೧೪ರ ಉದ್ಘಾಟನಾ ಪಂದ್ಯದಲ್ಲಿ ಎದುರಾಗಲಿವೆ. ಟೂರ್ನಿಯಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಸೋಲುವ ಸಂಪ್ರದಾಯ ಉಳಿಸಿಕೊಂಡು ಬಂದಿರುವ ಮುಂಬೈ ಇಂಡಿಯನ್ಸ್ ತಂಡ ಈ ಬಾರಿ ಗೆಲುವಿನ ಆರಂಭ ಕಾಣುವ ಹಂಬಲದಲ್ಲಿದ್ದರೆ, ಹೊಸ ಆಟಗಾರರೊಂದಿಗೆ ಹೊಸ ಹುರುಪಿನಲ್ಲಿರುವ ಆರ್‌ಸಿಬಿ ಕೂಡ ಶುಭಾರಂಭದ ನಿರೀಕ್ಷೆಯಲ್ಲಿದೆ.
ಕೋವಿಡ್-೧೯ ಸೋಂಕಿಗೆ ಸಿಲುಕಿರುವ ಆರಂಭಿಕ ದೇವದತ್ ಪಡಿಕಲ್ ತಂಡಕ್ಕೆ ಲಭ್ಯರಾಗುವುದು ಅನುಮಾನ ಮೂಡಿಸಿದೆ. ಇದರೊಂದಿಗೆ ಆರಂಭದಲ್ಲೇ ಆರ್‌ಸಿಬಿಗೆ ಕೊಂಚ ಹಿನ್ನಡೆಯಾದಂತಾಗಿದೆ. ಗ್ಲೆನ್ ಮ್ಯಾಕ್ಸ್‌ವೆಲ್, ಕೈಲ್ ಜೇಮಿಸನ್‌ರಂಥ ಬಲಾಢ್ಯರನ್ನು ದುಬಾರಿ ಮೊತ್ತಕ್ಕೆ ಖರೀದಿಸಿರುವ ಆರ್‌ಸಿಬಿ ಹ್ಯಾಟ್ರಿಕ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಮುಂಬೈ ಇಂಡಿಯನ್ಸ್‌ಗೆ ಸೋಲಿನ ರುಚಿ ತೋರಿಸಲು ಸಜ್ಜಾಗಿದೆ.
ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಮ್ಯಾಕ್ಸ್ ವೆಲ್ ಒಳಗೊಂಡ ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿರುವ ಆರ್‌ಸಿಬಿ ಮುಂಬೈ ಬೌಲರ್‌ಗಳಿಗೆ ಸವಾಲಾಗಬಲ್ಲದು. ಯಜುವೇಂದ್ರ ಚಾಹಲ್-ವಾಷಿಂಗ್ಟನ್ ಸುಂದರ್ ಸ್ಪಿನ್ ಜೋಡಿ, ಮೊಹಮದ್ ಸಿರಾಜ್-ನವದೀಪ್ ಸೈನಿ ವೇಗದ ಜೋಡಿ ಮಿಂಚುವ ತವಕದಲ್ಲಿದೆ. ಮತ್ತೊಂದೆಡೆ, ಐದು ಬಾರಿ ಪ್ರಶಸ್ತಿ ಗೆದ್ದ ಹುಮ್ಮಸ್ಸಿನಲ್ಲಿರುವ ಮುಂಬೈ ಇಂಡಿಯನ್ಸ್ ಟೂರ್ನಿಯಲ್ಲಿ ಯಶಸ್ವಿ ತಂಡ ಎನಿಸಿಕೊಂಡರೂ ಮೊದಲ ಪಂದ್ಯದಲ್ಲಿ ಸೋಲುವ ಇತಿಹಾಸ ಬದಲಿಸುವ ತವಕದಲ್ಲಿದೆ.
ಮುಖಾಮುಖಿ: ೨೯
ಆರ್‌ಸಿಬಿ: ೧೦
ಮುಂಬೈ: ೧೯