ಇಂದು ಎರಡು ಪಂದ್ಯ

ಇಂದು ಎರಡು ಪಂದ್ಯ

ಬೆಂಗಳೂರು : ಐಪಿಎಲ್ ೨೦೨೧ನ ನಾಲ್ಕನೇ ಸುತ್ತಿನಲ್ಲಿ ಇಂದು ಎರಡು ಪಂದ್ಯಗಳು ನಡೆಯುತ್ತಿವೆ. ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಎರಡನೇ ಪಂದ್ಯ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮಧ್ಯೆ ನಡೆಯಲಿದೆ. ಪಂಜಾಬ್ ಮತ್ತು ಹೈದರಾಬಾದ್ ಪಂದ್ಯ ಚೆನ್ನೈನ ಚೇಪಾಕ್ ಸ್ಟೇಡಿಯಂನಲ್ಲಿ ಮಧ್ಯಾಹ್ನ ೩:೩೦ಕ್ಕೆ ಆರಂಭವಾಗುತ್ತದೆ. ಕೋಲ್ಕತಾ ಮತ್ತು ಚೆನ್ನೈ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸಂಜೆ ೭:೩೦ರಿಂದ ನಡೆಯಲಿದೆ.
ಕೆಎಲ್ ರಾಹುಲ್ ನೇತೃತ್ವದ ಪಂಜಾಬ್ ತಂಡಕ್ಕೆ ಸವಾಲೊಡ್ಡಿರುವ ಹೈದರಾಬಾದ್ ಸನ್ ರೈಸರ್ಸ್ ತಂಡ ಈ ಸೀಸನ್‌ನಲ್ಲಿ ಚೊಚ್ಚಲ ಗೆಲುವಿಗಾಗಿ ತಡಕಾಡುತ್ತಿದೆ. ಪಂಜಾಬ್ ತಂಡ ಆಡಿರುವ ಮೂರು ಪಂದ್ಯಗಳಲ್ಲಿ ಗೆದ್ದಿರುವುದು ಒಮ್ಮೆ ಮಾತ್ರ. ಎರಡು ಪಂದ್ಯಗಳನ್ನ ಸೋತಿದೆ. ನಾಯಕ ಕೆಎಲ್ ರಾಹುಲ್ ಸೇರಿದಂತೆ ತಂಡದ ಬ್ಯಾಟಿಂಗ್ ಪಡೆ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿದೆ. ನಾಯಕನ ಜೊತೆ ಕ್ರಿಸ್ ಗೇಲ್ ಮತ್ತು ಮಯಂಕ್ ಅಗರ್ವಾಲ್ ಅವರು ಪಂಜಾಬ್ ಬ್ಯಾಟಿಂಗ್‌ನ ಶಕ್ತಿಯಾಗಿದ್ದಾರೆ.
ಇವೆರಡು ತಂಡಗಳು ಐಪಿಎಲ್‌ನಲ್ಲಿ ಈ ಹಿಂದೆ ಆಡಿರುವ ಐದು ಪಂದ್ಯಗಳಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಮೂರರಲ್ಲಿ ಗೆದ್ದಿದೆ. ಕಳೆದ ವರ್ಷದ ಐಪಿಎಲ್‌ನಲ್ಲಿ ಎರಡೂ ತಂಡಗಳು ಒಮ್ಮೊಮ್ಮೆ ಗೆದ್ದಿವೆ. ಇವತ್ತಿನ ಪಂದ್ಯ ಯಾರಿಗೆ ಒಲಿಯುತ್ತೆ ಕಾದುನೋಡಬೇಕು.
ಮುಂಬೈನಲ್ಲಿ ಸಂಜೆಯ ಬಳಿಕ ನಡೆಯಲಿರುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ನಡುವೆ ರೋಚಕ ಹಣಾಹಣಿ ನಿರೀಕ್ಷಿಸಲಾಗಿದೆ. ಮೊದಲ ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡಿ ನಿರಾಸೆ ತೋರಿದ್ದ ಧೋನಿ ನಾಯಕತ್ವದ ಸಿಎಸ್‌ಕೆ ತಂಡ ನಂತರದ ಎರಡೂ ಪಂದ್ಯಗಳಲ್ಲಿ ಜಯಭೇರಿ ಭಾರಿಸಿ ತಮ್ಮದು ಪ್ರಬಲ ತಂಡವೆಂದು ಸಾಬೀತು ಮಾಡಿದೆ. ಈಗ ಕೆಕೆಆರ್ ವಿರುದ್ಧ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡುವ ಉತ್ಸಾಹದಲ್ಲಿದೆ. ಅತ್ತ, ಇಯಾನ್ ಮಾರ್ಗನ್ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡ ನಿರಾಸಾದಾಯಕ ಪ್ರದರ್ಶನ ನೀಡಿದೆ. ಈ ಪಂದ್ಯದಲ್ಲಿ ಸದ್ಯಕ್ಕೆ ಚೆನ್ನೈ ತಂಡ ಗೆಲುವಿನ ಫೇವರಿಟ್ ಎನಿಸಿದೆ.