ನಿಗೂಢ ಕಾಯಿಲೆ ಅಬ್ಬರ : ಅಸ್ವಸ್ಥ ಸಂಖ್ಯೆ ೫೫೧ಕ್ಕೆ ಏರಿಕೆ

ನಿಗೂಢ ಕಾಯಿಲೆ ಅಬ್ಬರ : ಅಸ್ವಸ್ಥ ಸಂಖ್ಯೆ ೫೫೧ಕ್ಕೆ ಏರಿಕೆ

ಅಮರಾವತಿ : ಕರೊನಾ ಸೋಂಕು ಸಂಕಷ್ಟ ತಂದಿಟ್ಟಿರುವ ಬೆನ್ನಲ್ಲೇ ಆಂಧ್ರ ಪ್ರದೇಶದ ಎಲೂರಿನಲ್ಲಿ ನಿಗೂಢ ಕಾಯಿಲೆಯೊಂದು ಪತ್ತೆಯಾಗಿದೆ. ಸುಮಾರು ೫೫೦ಕ್ಕೂ ಹೆಚ್ಚು ಮಂದಿಯನ್ನು ಅಸ್ವಸ್ಥ ಮಾಡಿರುವ ಈ ಕಾಯಿಲೆಗೆ ಕಾರಣವೇನು ಎನ್ನುವುದಕ್ಕೆ ಇದೀಗ ಮೂಲಗಳು ಸಿಗಲಾರಂಭಿಸಿವೆ.

ಈಗಾಗಲೇ ಹಾಲು ಮತ್ತು ನೀರಿನ ಪರಿಶೀಲನೆ ನಡೆಸಲಾಗಿದೆ. ಅದರಲ್ಲಿ ಹೆಚ್ಚಿನ ಲೋಹದ ಅಂಶ ಕಂಡುಬಂದಿಲ್ಲ. ನೀರು ಮತ್ತು ಹಾಲಿನಿಂದ ಈ ಸಮಸ್ಯೆಯಾಗಿರುವ ಸಾಧ್ಯತೆಯಿಲ್ಲ. ತರಕಾರಿ, ಸಿಹಿ ತಿಂಡಿಗಳನ್ನು ಪರಿಶೀಲನೆಗೆ ಕಳುಹಿಸಿಕೊಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಆಂಧ್ರಪ್ರದೇಶದ ಎಲೂರಿಗೆ ಕೇಂದ್ರ ಸರ್ಕಾರವು ಮೂವರು ತಜ್ಞರ ತಂಡವನ್ನು ಕಳುಹಿಸಿದೆ. ಏಮ್ಸ್‌ನ ತುರ್ತು ಔಷಧ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಜಮ್‌ಷೆಡ್ ನಾಯರ್, ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಯ ತಜ್ಞ ಡಾ. ಅವಿನಾಶ್ ದಿಯೋಷ್ಟವರ್ ಮತ್ತು ದೆಹಲಿಯ ರಾಷ್ಟ್ರೀಯ ಕಾಯಿಲೆ ನಿಯಂತ್ರಣ ಕೇಂದ್ರದ ಉಪ ನಿರ್ದೇಶಕ ಡಾ. ಸಂಕೇತ್ ಕುಲಕರ್ಣಿ ಅವರು ಪರಿಸ್ಥಿತಿಯ ಅಧ್ಯಯನ ಮಾಡುತ್ತಿದ್ದಾರೆ.

ಈ ಕಾಯಿಲೆಗೆ ಒಳಗಾದವರ ರಕ್ತದ ಮಾದರಿಯಲ್ಲಿ ಅತಿಯಾದ ಲೋಹದ ಪ್ರಮಾಣ ಕಂಡುಬಂದಿರುವುದಾಗಿ ವರದಿ ಹೇಳಿದೆ. ಇವರೆಲ್ಲರ ದೇಹದಲ್ಲಿ ಸೀಸ ಮತ್ತು ನಿಕ್ಕಲ್‌ನಂತಹ ಲೋಹದ ಪ್ರಮಾಣ ಹೆಚ್ಚಾಗಿದೆ. ಜನರು ಅಸ್ವಸ್ಥರಾಗಿರುವುದಕ್ಕೆ ಇದೂ ಒಂದು ಕಾರಣವಾಗಿರಬಹುದು ಎಂದು ಪಶ್ಚಿಮ ಗೋದಾವರಿ ಜಿಲ್ಲೆಯ ಜಂಟಿ ಕಲೆಕ್ಟರ್ ಹಿಮಾಂಶು ಶುಕ್ಲಾ ಅವರು ತಿಳಿಸಿದ್ದಾರೆ. ಆದರೆ ಈ ಪ್ರಮಾಣ ಲೋಹ ಅವರ ದೇಹದೊಳಗೆ ಹೋಗಿದ್ದು ಹೇಗೆ ಎನ್ನುವುದರ ಬಗ್ಗೆ ಇನ್ನೂ ಅಧ್ಯಯನ ನಡೆಸಲಾಗುತ್ತಿದೆ.