ಮತ್ತೆ ’ವಿದ್ಯಾಗಮ’ ಪುನರಾರಂಭ.?

Education

ಮತ್ತೆ ’ವಿದ್ಯಾಗಮ’ ಪುನರಾರಂಭ.?

ಬೆಂಗಳೂರು : ಕೊರೋನಾ ಸೋಂಕಿನ ಭೀತಿಯ ನಡುವೆಯೂ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಯಾವುದೇ ತೊಂದರೆ ಆಗದಂತೆ ರಾಜ್ಯ ಸರ್ಕಾರ ವಿದ್ಯಾಗಮ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಕರ ಮೂಲಕ ಪಾಠ ಪ್ರವಚನ ಮುಂದುವರೆಸಿತ್ತು. ಆದ್ರೇ ಶಿಕ್ಷಕರಿಗೂ ಕೊರೋನಾ ಸೋಂಕು ಬಂದಿದ್ದಲ್ಲದೇ, ಅವರಿಂದಾಗಿ ವಿದ್ಯಾರ್ಥಿಗಳಿಗೂ ಸೋಂಕು ತಗುಲಿತ್ತು. ಇದರಿಂದಾಗಿ ವಿದ್ಯಾಗಮವನ್ನು ಸ್ಥಗಿತಗೊಳಿಸಲಾಗಿತ್ತು. ಇಂತಹ ವಿದ್ಯಾಗಮ ಕಾರ್ಯಕ್ರಮವನ್ನು ನೂತ ರೂಪುರೇಷಗಳೊಂದಿಗೆ ರಾಜ್ಯ ಸರ್ಕಾರ ಮತ್ತೆ ಪುನರಾರಂಭಿಸಲು ಮುಂದಾಗಿದೆ.
ಈ ಕುರಿತಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ದಿನಾಂಕ ೦೨-೧೨-೨೦೨೦ರಂದು ಪದವೀಧರ ಮತ್ತು ಶಿಕ್ಷಕ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರೊಂದಿಗೆ ನಡೆದ ಚರ್ಚಾ ಸಭೆಯಲ್ಲಿ ಕೈಗೊಂಡ ತುರ್ತು ಅಗತ್ಯ ಕ್ರಮಗಳ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಟಿಪ್ಪಣಿಯಲ್ಲಿ ಉಲ್ಲೇಖಿಸಿದ್ದಾರೆ.
ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳನ್ನು ಪ್ರಾರಂಭಿಸಬೇಕೆಂದು ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದ್ದು, ದಿನಾಂಕ ೨೩-೧೧-೨೦೨೦ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಸಭೆಯಲ್ಲಿ ಚರ್ಚಿಸಲಾದಂತೆ ಈ ಮಾಸಾಂತ್ಯಕ್ಕೆ ಸಭೆ ಏರ್ಪಡಿಸಲು ದಿನಾಂಕವನ್ನು ನಿಗದಿಪಡಿಸಲು ಕ್ರಮ ವಹಿಸುವಂತೆ ತಿಳಿಸಿದ್ದಾರೆ.
ಇನ್ನೂ ಮುಂದುವರೆದು, ವಿದ್ಯಾಗಮ ಕಾರ್ಯಕ್ರಮವನ್ನು ಪುನರಾರಂಭಿಸುವ ಬಗ್ಗೆ ರೂಪುರೇಷೆಗಳನ್ನು ಸಿದ್ಧಪಡಿಸಿ, ಕಡತದಲ್ಲಿ ಮಂಡಿಸುವುದು ಎಂದು ತಿಳಿಸಿದ್ದಾರೆ. ಹೀಗಾಗಿ ರಾಜ್ಯದಲ್ಲಿ ವಿದ್ಯಾಗಮ ಕಾರ್ಯಕ್ರಮ ನೂತನ ರೂಪುರೇಷೆಗಳೊಂದಿಗೆ ಮತ್ತೆ ಆರಂಭಗೊಳ್ಳಲಿದೆ ಎನ್ನಲಾಗುತ್ತಿದೆ. ಆ ಬಗ್ಗೆ ಕಾದು ನೋಡಬೇಕಿದೆ.