ಬನ್ನೇರುಘಟ್ಟ ಜೈವಿಕ ಉದ್ಯಾನವನ ಪ್ರವೇಶಕ್ಕೆ ಮುಕ್ತ
Bannerghatta

ಬೆಂಗಳೂರು: ಕೊರೊನಾ ತಗ್ಗಿದರಿಂದ ಎಲ್ಲೆಡೆ ಅನ್ಲಾಕ್ ಆಗುತ್ತಿದ್ದಂತೆ ಇದೀಗ ಬನ್ನೇರುಘಟ್ಟ ಜೈವಿಕ ಉದ್ಯಾನವನ ಕೂಡ ಪ್ರವಾಸಿಗರನ್ನು ತನ್ನತ್ತ ಸೆಳೆಯುವುದಕ್ಕೆ ಸಿದ್ಧವಾಗಿದೆ.
ಬರೋಬ್ಬರಿ ಎರಡು ತಿಂಗಳ ಬಳಿಕ ಮತ್ತೆ ಉದ್ಯಾನವನ ಆರಂಭವಾಗಿದ್ದು, ಕೆಲ ನಿಯಮಗಳನ್ನು ವಿಧಿಸಿ ಉದ್ಯಾನವನ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ. ಇಷ್ಟು ದಿನ ಮನೆಯಲ್ಲಿಯೇ ಕೂತು ಟಿವಿಯಲ್ಲಿ ಪ್ರಾಣಿ ಪ್ರಪಂಚ ನೋಡುತ್ತಿದ್ದ ಪ್ರವಾಸಿಗರಿಗೆ, ಸಫಾರಿ ಪ್ರವೇಶಕ್ಕೆ ಸರ್ವ ತಯಾರಿ ಮಾಡಲಾಗಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನ ಪ್ರಕೃತಿ ಮಡಿಲಿನಲ್ಲಿ ಕಂಗೊಳಿಸುತ್ತಿರುವ ವನ್ಯಜೀವಿಗಳ ಆಶ್ರಯ ತಾಣವಾಗಿದೆ. ಇಲ್ಲಿ ಸಾವಿರಾರು ಪ್ರಭೇದದ ಜೀವರಾಶಿಗಳಿದ್ದು, ಪ್ರಾಣಿ ಪ್ರಿಯರನ್ನು ತನ್ನತ್ತ ಸೆಳೆಯುವ ಆಕರ್ಷಣೀಯ ತಾಣವಾಗಿದೆ. ಆದರೆ ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಎರಡು ತಿಂಗಳಿಗೂ ಅಧಿಕ ಸಮಯ ಪ್ರವಾಸಿಗರ ಭೇಟಿ ನಿಷೇಧಿಸಲಾಗಿತ್ತು.
ಇದೀಗ ಇಂದಿನಿಂದ ಹಲವು ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಮತ್ತೆ ಉದ್ಯಾನವನನ್ನು ಪ್ರವಾಸಿಗರಿಗೆ ಮುಕ್ತ ಮಾಡಲಾಗಿದೆ. ಪ್ರವಾಸಿಗರ ಹಿತದೃಷ್ಟಿಯಿಂದ ಮೃಗಾಲಯ, ಚಿಟ್ಟೆ ಉದ್ಯಾನ ಮತ್ತು ಸಫಾರಿಯ ವೀಕ್ಷಕರ ಸಂಖ್ಯೆಯನ್ನು ಮಿತಿಗೊಳಿಸಲಾಗಿದ್ದು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಒಂದು ಕುಟುಂಬದ ಗರಿಷ್ಠ ೭ ಮಂದಿಯನ್ನು ೧ ಗುಂಪಾಗಿ ಪರಿಗಣಿಸಲಾಗುತ್ತಿದೆ.
ಪ್ರತಿ ಗುಂಪು ಕನಿಷ್ಠ ೬ ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗಿದೆ. ಸಫಾರಿಗೆ ಹವಾ ನಿಯಂತ್ರಿತವಲ್ಲದ ಬಸ್ಸುಗಳು ಶೇ ೫೦ ರಷ್ಟು ಸೇವೆ ನೀಡಲಿವೆ. ಜೀಪ್ಗಳಲ್ಲಿ ಸಫಾರಿಗೆ ತೆರಳಲು ಕುಟುಂಬಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆದರೆ ಚಾಲಕ ಮತ್ತು ಪ್ರವಾಸಿಗರ ನಡುವೆ ರಕ್ಷಣಾತ್ಮಕ ಪರದೆ ಅಳವಡಿಸಿದ್ದು, ಜೀಪ್ ಸಫಾರಿ ಕುಟುಂಬ ಗುಂಪಿಗೆ ಮಾತ್ರ ಲಭ್ಯವಿದೆ. ಟಿಕೇಟ್ ಕಾಯ್ದಿರಿಸುವುದು ಸಂಪೂರ್ಣವಾಗಿ ಆನ್ಲೈನ್ ವ್ಯವಸ್ಥೆಗೆ ಸಿಮಿತವಾಗಿದೆ. ಕಡ್ಡಾಯವಾಗಿ ಫೇಸ್ ಮಾಸ್ಕ್ ಧರಿಸಬೇಕು.
ಮೊದಲು ಪ್ರವೇಶದ್ವಾರದಲ್ಲಿ ಡಿಜಿಟಲ್ ಥರ್ಮೋಮೀಟರ್ ಮೂಲಕ ಸ್ಕ್ಯಾನ್ ಮಾಡಿ, ನಂತರ ಸ್ಯಾನಿಟೈಸರ್, ಹ್ಯಾಂಡ್ ವಾಶ್, ಸೇರಿದಂತೆ ಅಗತ್ಯ ವ್ಯವಸ್ಥೆಯನ್ನು ಎಲ್ಲಾ ಪ್ರವೇಶ ದ್ವಾರ ಮತ್ತು ನಿರ್ಗಮನ ಪ್ರದೇಶದ ಬಳಿ ವ್ಯವಸ್ಥೆ ಮಾಡಲಾಗಿದೆ. ಉದ್ಯಾನವನದ ರೆಸ್ಟೋರೆಂಟ್ಗಳಲ್ಲಿ ಊಟ ಉಪಹಾರಕ್ಕೆ ಸದ್ಯ ನಿರ್ಬಂಧವಿದ್ದು, ಕೇವಲ, ಬಿಸ್ಕೆಟ್, ಟೀ ನೀರು ಮಾತ್ರ ಪ್ರವಾಸಿಗರಿಗೆ ಒದಗಿಸಲಾಗುತ್ತಿದೆ , ಆದರೂ ಮನೆಯಿಂದ ಟಿಫಿನ್ ತಂದು ಕೊಂಡರೆ ಇನ್ನೂ ಒಳಿತು ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯ ನಿರ್ವಾಹಕ ನಿರ್ದೇಶಕಿ ವನಶ್ರೀ ವಿಪಿನ್ ಸಿಂಗ್ ತಿಳಿಸಿದ್ದಾರೆ.