ವಿರಾಟ್ ಬಳಗದ ಕಣ್ಣು ಕುಕ್ಕಿದ ಪಿಂಕ್ ಬಾಲ್ ಹೊಳಪು

ವಿರಾಟ್ ಬಳಗದ ಕಣ್ಣು ಕುಕ್ಕಿದ ಪಿಂಕ್ ಬಾಲ್ ಹೊಳಪು

ಅಡಿಲೇಡ್: ೯೦ ರನ್ ಗೆಲುವಿನ ಗುರಿಯನ್ನು ೨೧ ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ತಲುಪಿರುವ ಆತಿಥೇಯ ಆಸ್ಟ್ರೇಲಿಯಾ, ಪ್ರವಾಸಿ ಭಾರತ ವಿರುದ್ಧ ಇಲ್ಲಿನ ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಚೊಚ್ಚಲ ಪಿಂಕ್ ಬಾಲ್ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
ಈ ಮೂಲಕ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ೧-೦ ಅಂತರದ ಮಹತ್ವದ ಮುನ್ನಡೆ ಕಾಯ್ದುಕೊಂಡಿದೆ. ಆಸೀಸ್ ವೇಗಿಗಳಾದ ಜೋಶ್ ಹ್ಯಾಜಲ್‌ವುಡ್ (೮ಕ್ಕೆ ೫ ವಿಕೆಟ್) ಹಾಗೂ ಪ್ಯಾಟ್ ಕಮಿನ್ಸ್ (೨೧ಕ್ಕೆ ೪ ವಿಕೆಟ್) ಮಾರಕ ದಾಳಿಗೆ ಸಿಲುಕಿದ ಟೀಮ್ ಇಂಡಿಯಾ ದ್ವಿತೀಯ ಇನ್ನಿಂಗ್ಸ್‌ನಲ್ಲಿ ೨೧.೨ ಓವರ್‌ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ ೩೬ ರನ್ನಿಗೆ ಕುಸಿದಿತ್ತು. ಕೊನೆಯವರವಾಗಿ ಕ್ರೀಸಿಗಿಳಿದ ಮೊಹಮ್ಮದ್ ಶಮಿ ಗಾಯಗೊಂಡ ಪರಿಣಾಮ ಬ್ಯಾಟಿಂಗ್ ಮುಂದುವರಿಸಲಾಗದೇ ನಿವೃತ್ತಿ ಪಡೆದರು. ಇದರೊಂದಿಗೆ ಭಾರತದ ಇನ್ನಿಂಗ್ಸ್ ಮುಕ್ತಾಯಗೊಳಿಸಲಾಯಿತು.
ಬಳಿಕ ಗುರಿ ಬೆನ್ನಟ್ಟಿದ ಆಸೀಸ್ ಆರಂಭಿಕರಾದ ಜೋನ್ ಬರ್ನ್ಸ್ ಹಾಗೂ ಮ್ಯಾಥ್ಯೂ ವೇಡ್ (೩೩) ಉತ್ತಮ ಆರಂಭ ನೀಡಿದರು. ಇವರಿಬ್ಬರು ಮೊದಲ ವಿಕೆಟ್‌ಗೆ ೭೦ ರನ್ ಪೇರಿಸಿ ತಂಡದ ಗೆಲುವನ್ನು ಖಚಿತಪಡಿಸಿದರು. ವೇಡ್ ಪತನಗೊಂಡರೂ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ ಜೋನ್ ಬರ್ನ್ಸ್ ಅಜೇಯ ಅರ್ಧಶತಕ (೫೧*) ಸಾಧಿಸಿದರು. ಇನ್ನುಳಿದಂತೆ ಮಾರ್ನಸ್ ಲಾಬುಷೇನ್ (೬) ಹಾಗೂ ಸ್ಟೀವನ್ ಸ್ಮಿತ್ (೧*) ರನ್ ಗಳಿಸಿದರು.
ಮೊದಲ ಇನ್ನಿಂಗ್ಸ್‌ನಲ್ಲಿ ೫೩ ರನ್‌ಗಳ ಮಹತ್ವದ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ೯/೧ ಎಂಬಲ್ಲಿದ್ದ ಮೂರನೇ ದಿನದಾಟ ಮುಂದುವರಿಸಿದ ಟೀಮ್ ಇಂಡಿಯಾ ದೊಪ್ಪನೆ ಕುಸಿಯಿತು.
ಆಸೀಸ್ ವೇಗಿಗಳಾದ ಪ್ಯಾಟ್ ಕಮಿನ್ಸ್ ಹಾಗೂ ಜೋಶ್ ಹ್ಯಾಜಲ್‌ವುಡ್, ಎದುರಾಳಿಗಳ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಿದರು. ಟೀಮ್ ಇಂಡಿಯಾದ ಯಾವನೇ ಬ್ಯಾಟ್ಸ್‌ಮನ್ ಎರಡಂಕಿಯನ್ನು ದಾಟಲಿಲ್ಲ.
ನೈಟ್ ವಾಚ್‌ಮ್ಯಾನ್ ಜಸ್‌ಪ್ರೀತ್ ಬೂಮ್ರಾ (೨) ಹೊರದಬ್ಬಿದ ಕಮಿನ್ಸ್, ಭಾರತೀಯ ಪತನಕ್ಕೆ ನಾಂದಿ ಹಾಡಿದರು. ಚೇತೇಶ್ವರ ಪೂಜಾರ (೦), ಮಯಂಕ್ ಅಗರವಾಲ್ (೯), ಅಜಿಂಕ್ಯ ರಹಾನೆ (೦) ಮತ್ತು ನಾಯಕ ವಿರಾಟ್ ಕೊಹ್ಲಿ (೪) ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಹಾದಿ ಹಿಡಿದರು.
ಈ ಮೂಲಕ ೧೩.೪ ಓವರ್‌ಗಳಲ್ಲಿ ೧೯ ರನ್ ಗಳಿಸುವಷ್ಟರಲ್ಲಿ ಪ್ರಮುಖ ಆರು ವಿಕೆಟ್‌ಗಳನ್ನು ಕಳೆದುಕೊಂಡು ಭಾರಿ ಸಂಕಷ್ಟಕ್ಕೆ ಸಿಲುಕಿತ್ತು. ಇಲ್ಲಿಂದ ಬಳಿಕವು ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಅಂತಿಮವಾಗಿ ೨೧.೨ ಓವರ್‌ಗಳಲ್ಲೇ ೩೬ ರನ್‌ಗಳಿಗೆ ಒಂಬತ್ತು ವಿಕೆಟ್ ಕಳೆದುಕೊಂಡಿತು.
ಮೊಹಮ್ಮದ್ ಶಮಿ (೧) ಕ್ರೀಸಿಗಿಳಿದರೂ ಗಾಯಗೊಂಡ ಪರಿಣಾಮ ಬ್ಯಾಟಿಂಗ್ ಮುಂದುವರಿಸಲಾಗದೇ ನಿವೃತ್ತಿ ಪಡೆದರು. ಇನ್ನುಳಿದಂತೆ ಹನುಮ ವಿಹಾರಿ (೮), ವೃದ್ಧಿಮಾನ್ ಸಹಾ (೪), ರವಿಚಂದ್ರನ್ ಅಶ್ವಿನ್ (೦) ಹಾಗೂ ಉಮೇಶ್ ಯಾದವ್ (೪*) ರನ್ ಗಳಿಸಿದರು. ಈ ಮೊದಲು ಪೃಥ್ವಿ ಶಾ (೪) ನಿರಾಸೆ ಮೂಡಿಸಿದ್ದರು.
ಆಸೀಸ್ ಪರ ಮಾರಕ ದಾಳಿ ಸಂಘಟಿಸಿದ ಜೋಶ್ ಹ್ಯಾಜಲ್‌ವುಡ್ ೫ ಓವರ್‌ಗಳಲ್ಲಿ ಕೇವಲ ೮ ರನ್ ತೆತ್ತು ಐದು ವಿಕೆಟ್ ಕಿತ್ತು ಮಿಂಚಿದರು. ಇದರಲ್ಲಿ ಮೂರು ಮೇಡನ್ ಓವರ್ ಸೇರಿತ್ತು. ಇವರಿಗೆ ತಕ್ಕ ಸಾಥ್ ನೀಡಿದ ಪ್ಯಾಟ್ ಕಮಿನ್ಸ್ ೨೧ ರನ್ನಿಗೆ ನಾಲ್ಕು ವಿಕೆಟ್ ಕಿತ್ತು ನಿಖರ ದಾಳಿ ಸಂಘಟಿಸಿದರು.