“ಯೋಗ ಜನಪ್ರಿಯವಾಗಲು ಕಾರಣಗಳು...

Yoga

“ಯೋಗ ಜನಪ್ರಿಯವಾಗಲು ಕಾರಣಗಳು...

ಯೋಗಾಸನದಿಂದ ಮನಸ್ಸು ಮತ್ತು ದೇಹ ಎರಡೂ ಹಗುರಾಗುವ ಜೊತೆಗೆ ಆತ್ಮವಿಕಾಸವಾಗುವುದು. ಬೇರೆ ವ್ಯಾಯಾಮ/ಕ್ರೀಡೆಗಳಲ್ಲಿ ದೇಹ ಮತ್ತು ಮನಸ್ಸುಗಳೆರಡೂ ವಿಕಾಸವಾಗುವುದಿಲ್ಲ. ಆದರೆ ಯೋಗ ಒಂದೇ ಕಾರ್ಯದಿಂದ ಎರಡೂ ಗುಣಗಳು ಸಾಧನೆಯಾಗುವುದರಿಂದ ‘ಯೋಗ ಬೇರೆ ವ್ಯಾಯಾಮಗಳಿಗಿಂತ ಉತ್ತಮ ಎನ್ನುವುದು ಯೋಗ ಸಾಧಕರ ಅಭಿಪ್ರಾಯವಾಗಿದೆ.
ಯೋಗದಿಂದ ಕೆಲಸ-ಕಾರ್ಯ ಮಾಡಲು ಶಕ್ತಿ ಹೆಚ್ಚಾಗುವುದಲ್ಲದೇ, ಜಠರಾಗ್ನಿ ವೃದ್ಧಿಸುವುದು, ಕೊಬ್ಬು ಕರಗುವುದಲ್ಲದೇ ಪ್ರಮಾಣಬದ್ಧ ಶರೀರವನ್ನು ಪಡೆಯಲು ಸಾಧ್ಯವಾಗುತ್ತದೆ. ಕೃಷವಾಗಿರುವವರು ಇನ್ನೂ ಕೃಷರಾಗುವ ಬದಲು ಪ್ರಮಾಣ ಬದ್ಧ ಶರೀರವನ್ನು ಪಡೆದುಕೊಳ್ಳುವರು, ಸ್ಥೂಲಕಾಯದವರು ತಮ್ಮ ದೇಹದಲ್ಲಿನ ಹೆಚ್ಚಿನ ಕೊಬ್ಬಿನಾಂಶವನ್ನು ನೀಗಿಸಿಕೊಳ್ಳುವುದರ ಜೊತೆಗೆ ದೇಹದ ಕ್ಷೇಮಕ್ಕಾಗಿ ವಿವಿಧ ಕೆಲಸ ಕಾರ್ಯಗಳು, ಪರಿಪೂರ್ಣ ಸಮನ್ವಯತೆಯನ್ನು ಉಂಟು ಮಾಡುವುದೇ ಯೋಗಭ್ಯಾಸದ ಉದ್ದೇಶವಾಗಿದ್ದು, ಯೋಗಾಭ್ಯಾಸ ಮಾಡುವುದು ದಿನದಿನೇ ಹೆಚ್ಚಿಸಿದಂತೆ ಅಭ್ಯಾಸಕ್ರಮದಿಂದ ಮನಸ್ಸಿನ ಚಂಚಲತೆಯು ಸುಧಾರಿಸುತ್ತದೆ. ಪ್ರತಿಯೊಂದು ಕೆಲಸವೂ ಅಚ್ಚುಕಟ್ಟಾಗಿ ಮಾಡಲು ಸಹಕರಿಸುತ್ತದೆ. ಸುಖ ಮತ್ತು ದುಃಖದ ಪರಿಸ್ಥಿತಿಯಲ್ಲಿ ಮನಸ್ಸಿಗೆ ಸಮತ್ವವನ್ನು ನೀಡುತ್ತದೆ.
ಯೋಗದ ಅತ್ಯಂತ ಪ್ರಭಾವ ಮತ್ತು ಸಾಮರ್ಥ್ಯದ ಕಾರಣವನ್ನು ಆಧುನಿಕ ವಿಜ್ಞಾನಕ್ಕೆ ಸವಾಲಾಗಿ ಅಸ್ತಮಾಮ ಮಧುಮೇಹ, ರಕ್ತದೊತ್ತಡ, ಸಂಧಿವಾತ, ಪಚನಕ್ರಿಯೆ, ಮುಂತಾದವುಗಳನ್ನು ಯೋಗದಿಂದ ಪರ್ಯಾಯ ಚಿಕಿತ್ಸಾ ಪದ್ಧತಿಯನ್ನಾಗಿ ಅನುಸರಿಸಿ ಪ್ರಯೋಜನ ಪಡೆಯಲಾಗಿದ್ದು, ಇದಕ್ಕೆ ಉದಾಹರಣೆಯಾಗಿ ಹೆಚ್.ಐ.ವಿ ರೋಗಿಗಳಿಗೆ ಯೋಗಾಭ್ಯಾಸದಿಂದ ಯೋಗದ ಪರಿಣಾಮವನ್ನು ಕುರಿತು ನಡೆಸಲಾಗಿರುವ ಸಂಶೋಧನೆಗಳು ಉತ್ತಮ ಫಲಿತಾಂಶವನ್ನು ನೀಡಿದೆ. ಯೋಗವು ದೇಹದ ಇತರೆ ಎಲ್ಲಾ ವ್ಯವಸ್ಥೆಗೆ ಮತ್ತು ಅಂಗಾಂಗದ ಮೇಲೆ ನೇರ ಪ್ರಭಾವ ಬೀರುವ ನಿರ್ನಾಳ ಗ್ರಂಥಿ ವ್ಯವಸ್ಥೆ ಹಾಗೂ ನರಮಂಡಳದ ವ್ಯವಸ್ಥೆಗಳನ್ನು ನಿಯಂತ್ರಿಸುವ ಸಾಮರ್ಥ್ಯ ಯೋಗಕ್ಕೆ ಇದೆ, ಜೊತೆಗೆ ಯೋಗ ಬಹಳ ಯಶಸ್ವಿ ಚಿಕಿತ್ಸೆಯಾಗಿದೆ ಎಂದು ವೈದ್ಯಕೀಯ ವಿಜ್ಞಾನಿಗಳು ಅಭಿಪ್ರಾಯಿಸಿದ್ದಾರೆ.
ಪ್ರತಿ ದಿನ ಯೋಗಾಸನ ಮಾಡುವುದರಿಂದ ಥೈರಾಯ್ಡ್ ಗ್ರಂಥಿಗಳು, ಎಂಡೋಕ್ರೈಂ ಗ್ರಂಥಿಗಳು, ಪಿಟ್ಯುಟರಿ ಗ್ರಂಥಿಗಳು, ಅಡ್ರಿನಲ್ ಗ್ರಂಥಿಗಳು, ವೃಷಣ, ಮೂತ್ರ ಪಿಂಡಗಳು, ನಿರ್ನಾಳ ಗ್ರಂಥಿಗಳು, ನರಮಂಡಲ ಸುಸ್ಥಿತಿಯಲ್ಲಿದ್ದು ಇವುಗಳಿಂದ ಉಂಟಾಗುವ ತೊಂದರೆಗಳು ನಿವಾರಣೆಯಾಗುವುದಲ್ಲದೇ, ಮನಸ್ಸಿನ ಗೊಂದಲ, ಚಿಂತೆಯನ್ನು ದೂರಮಾಡಿ ಜ್ಞಾಪಕ ಶಕ್ತಿ ಹೆಚ್ಚುವುದು. ಇಷ್ಟೇ ಅಲ್ಲದೇ ಮೂತ್ರ ಪಿಂಡಗಳು ಚೆನ್ನಾಗಿ ಕೆಲಸವನ್ನು ಮಾಡುವುದರಿಂದ ಹೊಟ್ಟೆ ಸ್ವಚ್ಛವಾಗಿ ಪಚನಕ್ರಿಯೆ ವೃದ್ಧಿಸುವುದಲ್ಲದೇ, ರಕ್ತವು ಶುದ್ಧಿಯಾಗುತ್ತದೆ. ಇದೆಲ್ಲದರ ಪರಿಣಾಮ ಹೊಟ್ಟೆ ಸುತ್ತಳತೆಯ ಬೊಜ್ಜು ಕ್ರಮೇಣ ಕಡಿಮೆಯಾಗಿ ದೇಹದ ಸ್ವಸ್ಥ ಆರೋಗ್ಯ ಜೊತೆಗೆ ದೇಹವನ್ನು ಸುಂದರವಾಗಿಟ್ಟು ಚೆನ್ನಾಗಿ ಕೆಲಸ-ಕಾರ್ಯಗಳನ್ನು ಮಾಡಲು ಸಹಕರಿಸುತ್ತದೆ.
ಯೋಗದಲ್ಲಿ ರೋಗ ಚಿಕಿತ್ಸೆಗಾಗಿ ಯೋಗಾಸನಗಳು ಮತ್ತು ದೈಹಿಕ/ಮಾನಸಿಕ ಶಕ್ತಿ ಸಂವರ್ಧನೆಗಾಗಿ ಯೋಗಾಸನ ಗಳು ಹಾಗೂ ಆಧ್ಯಾತ್ಮಿಕ ಸಾಧನೆಗಾಗಿ ಯೋಗಾಸನಗಳು ಎಂಬುದಾಗಿ
 ವಿಂಗಡಣೆ ಮಾಡಬಹುದಾಗಿದೆ. ಈ ಮೇಲೆ ತಿಳಿಸಿ ಯೋಗ-ಯೋಗಾಸನವನ್ನು ಪ್ರತಿಯೊಬ್ಬರೂ ಜೀನವದಲ್ಲಿ ಅಳವಡಿಸಿಕೊಳ್ಳುವುದೇ ನಿಜವಾದರೆ ಎಲ್ಲರೂ ತಮ್ಮೊಳಗಾಗುತ್ತಿರುವ ಬದಲಾವಣೆಯ ಶಕ್ತಿ, ದೇಹದ ಆಕಾರ,
 ಉತ್ಸಾಹ ವೃದ್ಧಿಸಿ ಅಂತರಂಗ ವಿಕಾಸಕ್ಕೆ ಹೆಚ್ಚು ಅಪರಿಮಿತ ಶಕ್ತಿ, ಗಟ್ಟಿಮುಟ್ಟಾದ ದೇಹ, ಬುದ್ಧಿ ಚುರುಕಾಗುವುದು, ಮನಸ್ಸು ಎಂತಹ ಪರಿಸ್ಥಿಯಲ್ಲಿಯಾದರೂ ಸಂಯಮವನ್ನು ಕಾಯ್ದು ಶಾಂತಸ್ಥಿತಿಯಲ್ಲಿದ್ದು,  ಅಂತರಂಗ ಅಸನಗೊಳ್ಳುವುದಲ್ಲದೇ ಬಹಿರಂಗ ಸೊಗಸಾಗಿರುತ್ತದೆ ಇದೇ ಯೋಗಸನದ ಸಫಲತೆಗೆ ಸಾಕ್ಷಿಯಾಗುತ್ತದೆ
ವೈ.ಕೆ.ಜಗನ್ನಾಥಶೆಟ್ಟಿ. ಮೊ. ಸಂ. ೭೪೧೧೫೪೯೯೭೩, ೯೩೪೧೩೦೪೯೮೫